ಧನುಷಾಕ್ಷ
	ಒಬ್ಬ ಮಹರ್ಷಿ.  ಮಹಾಭಾರತದ ವನಪರ್ವ ಹಾಗೂ ಶಾಂತಿಪರ್ವಗಳಲ್ಲಿ ಇವನ ವಿಷಯ ಬರುತ್ತದೆ.  ತಪೋನಿಧಿಯೂ ಜ್ಞಾನಿಯೂ ಆದ ಈತನೊಡನೆ ಮೇಧಾವಿಯೆಂಬ ಋಷಿಕುಮಾರನೊಬ್ಬ ಸ್ವೇಚ್ಛೆಯಿಂದ ವರ್ತಿಸಿದ.  ಕೋಪಗೊಂಡ ಧನುಷಾಕ್ಷ ನೀನು ಭಸ್ಮನಾಗು ಎಂದು ಶಪಿಸಿದ.  ಆದರೆ, ಮುನಿಕುಮಾರನಿಗೆ ಶಾಪ ತಟ್ಟಲಿಲ್ಲ.  ಇದಕ್ಕೆ ಕಾರಣ ಮೇಧಾವಿಯ ಜನನಕ್ಕೆ ಸಂಬಂಧಿಸಿದ್ದು.  ಮೇಧಾವಿಯ ತಂದೆ ಬಾಲಧಿ ತನಗೊಬ್ಬ ದೀರ್ಘಾಯುಸ್ಸುಳ್ಳ ಮಗ ಬೇಕೆಂದು ತಪಸ್ಸು ಮಾಡಿದ.  ಪ್ರಸನ್ನರಾದ ದೇವತೆಗಳು ಲೋಕದಲ್ಲಿ ಹುಟ್ಟುವ ಎಲ್ಲರೂ ಮತ್ರ್ಯರೇ.  ಅಮತ್ರ್ಯರಾಗುವ ಸಂಭವವಿಲ್ಲ.  ಯಾವುದಾದರೂ ಒಂದು ನಿಮಿತ್ತವನ್ನು ಕಾಣಿಸಿ ಅಲ್ಲಿಯವರೆಗೆ ನಿನ್ನ ಮಗನಿಗೆ ಆಯುಸ್ಸನ್ನು ಕೇಳು ಕೊಡುವೆವು ಎಂದರು.  ಆಗ ಬಾಲಧಿ ತನ್ನ ಮುಂದಿದ್ದ ಪರ್ವತಗಳನ್ನು ತೋರಿ ಅವು ಇರುವವರೆಗೆ ನನ್ನ ಮಗ ಬದುಕಿದ್ದರೆ ಸಾಕು ಎಂದು ಬೇಡಿದ.  ಹೀಗೆ ವರಪ್ರಸಾದದಿಂದ ಹುಟ್ಟಿದ ಮೇಧಾವಿ ಯಾರನ್ನೂ ಲೆಕ್ಕಿಸದೆ ದುರ್ವರ್ತನೆಯಿಂದ ನಡೆಯುತ್ತಿರುತ್ತಾನೆ.  ಈ ವಿಷಯವನ್ನೆಲ್ಲ ಧನುಷಾಕ್ಷ ತನ್ನ ಜ್ಞಾನ ದೃಷ್ಟಿಯಿಂದ ತಿಳಿದು ತಾನೊಂದು ಮಹಿಷದ ಆಕಾರ ತಾಳಿ ಸಮೀಪದಲ್ಲಿದ್ದ ಬೆಟ್ಟಗಳನ್ನೆಲ್ಲ ಕೊಂಬಿನಿಂದ ತಿವಿದು ಉರುಳಿಸುತ್ತಾನೆ.  ಆಗ ಮೇಧಾವಿಗೆ ಋಷಿಶಾಪ ತಟ್ಟಿ ಭಸ್ಮೀಭೂತನಾಗುತ್ತಾನೆ.
(ಎಸ್.ಎಂಎಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ